‘ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಬನವಾಸಿ, ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ.
ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಹೊಂದಿದ್ದ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ಅನೇಕ ಟೀವಿ ಕಾರ್ಯಕ್ರಮಗಳು, ಜಾಹಿರಾತು ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ವೆಸ್ತಾಕ್ರಾಫ್ಟ್ ಎಂಬ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ.
‘ತಿಗರಿಯ ಹೂಗಳು’, ‘ಬಿತ್ತಿದ ಬೆಂಕಿ’ ಇವರ ಕವನ ಸಂಕಲನಗಳು. 2017ರಲ್ಲಿ ಪ್ರಕಟಗೊಂಡ ಇವರ ‘ಬೇರು’ ಕಾದಂಬರಿಯು ಆ ವರ್ಷದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪುರಸ್ಕಾರ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಚದುರಂಗ’ ದತ್ತಿನಿಧಿ, `ಕುವೆಂಪು’ ಪ್ರಶಸ್ತಿ, ‘ಚಡಗ ಕಾದಂಬರಿ ಪ್ರಶಸ್ತಿ’, `ಶಾ ಬಾಲುರಾವ್’ ಹಾಗೂ `ಬಸವರಾಜ ಕಟ್ಟಿಮನಿ ಯುವ ಬರಹಗಾರ’ ಪ್ರಶಸ್ತಿ ಸೇರಿದಂತೆ ಸುಮಾರು 9 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ವಿಶೇಷ ಮತ್ತು ದಾಖಲೆಯಾಗಿದೆ. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿದೆ.