ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಲ್ಲೊಬ್ಬರಾದ ಎಸ್.ಜಿ.ವಾಸುದೇವ್ ಬಿಎಸ್‌ಸ್ಸಿ ಓದಲು ಸೇರಿದ್ದರೂ ಅರ್ಧಕ್ಕೆ ನಿಲ್ಲಿಸಿ ಚಿತ್ರಕಲೆಯ ಆಸಕ್ತಿಯಿಂದಾಗಿ ಮದ್ರಾಸ್‌ನ ಸರ್ಕಾರಿ ಕಲೆ ಮತ್ತು ಕರಕುಶಲ ಕಾಲೇಜಿಗೆ ಸೇರಿದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾಜಗತ್ತಿನಲ್ಲಿರುವ ಅವರಿಗೆ; ವೃಕ್ಷ, ಮಿಥುನ, ಅವನು-ಅವಳು ಸರಣಿ ಚಿತ್ರಗಳು ಖ್ಯಾತಿ ತಂದುಕೊಟ್ಟಿವೆ.
1965-66ರಲ್ಲಿ ಸ್ಥಾಪನೆಯಾದ ಚೋಳಮಂಡಲ ಕಲಾವಿದರ ಗ್ರಾಮದ ಸಂಸ್ಥಾಪಕರಲ್ಲಿ ವಾಸುದೇವ್ ಅವರೂ ಒಬ್ಬರು. ಅವರಿಗೆ ಕೆ. ಎಸ್. ಫಣಿಕ್ಕರ್ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ. ಅವರ ಕಲಾಯಾನದ ಕುರಿತು ‘ದಿ ಓಪನ್ ಫ್ರೇಮ್’ ಎಂಬ ಸಾಕ್ಷ್ಯಚಿತ್ರವೂ ನಿರ್ಮಾಣವಾಗಿದೆ.