ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಕನ್ನಡದ ಬಹುಮುಖ್ಯ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ‘ಮೈಸೂರೆಂಬ ಬೆರಗು’, ‘ಸಹಸ್ರಪದಿ’, ಇಂಥವರೂ ಇದ್ದಾರೆ ಜಗದೊಳಗೆ, ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.
ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮಹಾತ್ಮಾಗಾಂಧಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ನಾರಾಯಣಸ್ವಾಮಿ ಪ್ರಶಸ್ತಿ, ಸೇರಿದಂತೆ ಹಲವು ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.