ಕನ್ನಡ ಮಹಿಳಾ ಕಾವ್ಯದ ಮುಖ್ಯ ಕವಿಗಳಲ್ಲಿ ಒಬ್ಬರಾದ ಪ್ರತಿಭಾ ನಂದಕುಮಾರ್ ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
‘ನಾವು ಹುಡುಗಿಯರೇ ಹೀಗೆ’, ‘ಈ ತನಕ’, ‘ರಸ್ತೆಯಂಚಿನ ಗಾಡಿ’, ‘ಕವಡೆಯಾಟ’, ‘ಆಹಾ ಪುರುಷಾತಾರಂ’, ‘ಅವರು ಪುರಾವೆಗಳನ್ನು ಕೇಳುತ್ತಾರೆ’, ‘ಮುನ್ನುಡಿ ಬೆನ್ನುಡಿಗಳ ನಡುವೆ’, ‘ಕಾಫಿ ಹೌಸ್’, ‘ಮುದುಕಿಯರಿಗಿದು ಕಾಲವಲ್ಲ’ ಅವರ ಕವನ ಸಂಕಲನಗಳು. ‘ಯಾನ’ ಕಥಾಸಂಕಲನ, ‘ಆಕ್ರಮಣ’ ಅನುವಾದಿತ ಕಥೆಗಳು, ‘ಸೂರ್ಯಕಾಂತಿ’ ಅನುವಾದಿತ ಡೋಗ್ರಿ ಕವನಗಳು.‘ಅನುದಿನದ ಅಂತರಗಂಗೆ’ ಪ್ರತಿಭಾ ನಂದಕುಮಾರ್ ಅವರ ಆತ್ಮಕಥನ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ‘ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಮುದ್ದಣ್ಣ ಕಾವ್ಯ ಪ್ರಶಸ್ತಿ’, ‘ಡಾ.ಶಿವರಾಮ ಕಾರಂತ ಪ್ರಶಸ್ತಿ’, ‘ಪು.ತಿ.ನ ಕಾವ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.