Choose Language:

N Damodara Shetty

ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ.

ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್‌ ಆಫ್‌ ಡ್ರಾಮದಲ್ಲಿ ತರಬೇತಿ ಪಡೆದು ನಂತರ ಸಮುದಾಯ ನಾಟಕ ಸಂಸ್ಥೆಯಲ್ಲಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಸಮಾನ ಮನಸ್ಕರೊಡನೆ ಸೇರಿ ‘ಭೂಮಿಕ’ ಎಂಬ ನಾಟಕ ತಂಡವನ್ನು ನಿರ್ಮಿಸಿ, ಆ ಮೂಲಕ ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳನ್ನೂ ಪ್ರದರ್ಶಿಸಿದ್ದಾರೆ.

ರಂಗಚಟುವಟಿಕೆಗಳ ಜೊತೆಗೆ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿರುವ ಅವರು ಪ್ರಜಾವಾಣಿ ಪತ್ರಿಕೆಗಾಗಿ ‘ತೆಂಕಣದ ಸುಳಿಗಾಳಿ’ ಅಂಕಣ ಬರೆದಿದ್ದಾರೆ. ‘ಸುಳುವಿನೊಳಗೆ’, ‘ಸರದಿ’ (ಕಾದಂಬರಿ), ‘ಕೆ.ಎನ್. ಟೇಲರ್‌’, ‘ಮುದ್ದಣ ಬದುಕು-ಬರಹ’, ‘ನಾರಾಯಣಗುರು’, ‘ಪೇಜಾವರ ಸದಾಶಿವರಾಯರು’, ‘ಕೆ.ವಿ. ಸುಬ್ಬಣ್ಣ’ (ವ್ಯಕ್ತಿ ಪರಿಚಯ), ‘ಭತ್ತದ ಕಾಳುಗಳು’, ‘ಕರಿಯ ದೇವರ ಹುಡುಕಿ’, ‘ಅಶ್ವತ್ಥಾಮ’, ‘ಬಾಲ್ಯದ ನೆನಪುಗಳು’, ‘ದೇವರ ವಿಕರಾಳಗಳು’, ‘ಸಾಕ್ಷಾತ್ಕಾರ’, ‘ಮಹಾಕವಿ ಜಿ. ಶಂಕರ ಕುರುಪ್’, ‘ಭರತವಾಕ್ಯ’ (ಅನುವಾದ), ‘ಅದ್ಭುತ ರಾಮಾಯಣ’, ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಗೆಜೆಟಿಯರ್, ಕರ್ನಾಟಕ ನಾಟಕ ರಂಗಾಯಣ, ಕರ್ನಾಟಕ ಸರಕಾರದ ವಿವಿಧ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರ ‘ದೇವರ ವಿಕರಾಳ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಭಾರತೀಯ ಭಾಷಾ ಸಂಸ್ಥೆಯ ಭಾಷಾಭಾರತಿ ಸಮ್ಮಾನ್‌, ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ದುಬೈನ ಧ್ವನಿಪ್ರತಿಷ್ಠಾನ ‘ಶ್ರೀರಂಗರಂಗ’ಪ್ರಶಸ್ತಿ, ರಂಗೋತ್ರಿಯ ‘ಬುದ್ಧ ಪ್ರಶಸ್ತಿ’, ಬೆಂಗಳೂರಿನ ನಾಡಚೇತನ ಪ್ರಶಸ್ತಿ, ಉಡುಪಿಯ ಬೆಳ್ಳೆ ಉಪಾಧ್ಯಾಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು ದೊರೆತಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo