ಕಾದಂಬರಿಕಾರ, ಅಂಕಣಕಾರ, ಲೇಖಕ ಮತ್ತು ಅನುವಾದಕ ಎಂ.ಆರ್ ದತ್ತಾತ್ರಿ ಮೂಲತಃ ಚಿಕ್ಕಮಗಳೂರಿನವರು. ಮೈಸೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಕೆಜಿಎಫ್, ಪುಣೆ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿರುವ ದತ್ತಾತ್ರಿಯವರು ಇಆರ್‌ಪಿ ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೆಲಸ ಮಾಡಿದ್ದಾರೆ. ಅಮೆರಿಕ ಮತ್ತು ಭಾರತದ ಅನೇಕ ಕಂಪನಿಗಳಿಗೆ ಟೆಕ್ನಾಲಜಿ ಮತ್ತು ಪ್ರಾಜಕ್ಟ್ ಮ್ಯಾನೇಜ್‌ಮೆಂಟ್ ಅಡ್ವೈಸರ್ ಆಗಿ ಸೇವೆ ಸಲ್ಲಿಸಿರುವ ಅವರು ಸಾಹಿತ್ಯ, ತತ್ವಶಾಸ್ತ್ರ, ಮತ್ತು ಪ್ರವಾಸದಲ್ಲಿ ಆಸಕ್ತಿ ಹೊಂದಿದ್ದಾರೆ.
‘ಅಲೆಮಾರಿ ಕನಸುಗಳು’ ದತ್ತಾತ್ರಿಯವರ ಮೊದಲ ಪ್ರಕಟಿತ ಕೃತಿ. ಆನಂತರದಲ್ಲಿ ‘ಪೂರ್ವ-ಪಶ್ಚಿಮ’, ‘ದ್ವೀಪವ ಬಯಸಿ’, ‘ತಾರಾಬಾಯಿಯ ಪತ್ರ’, ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಶಿವಮೊಗ್ಗ ಕರ್ನಾಟಕ ಸಂಘದ ಡಾ. ಹಾ.ಮಾ. ನಾಯಕ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಡಾ. ನರಹಳ್ಳಿ ಪ್ರಶಸ್ತಿ, ಮಾಸ್ತಿ ಕಾದಂಬರಿ ಪುರಸ್ಕಾರ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು ಲಭಿಸಿವೆ.