ಸ್ತ್ರೀವಾದಿ ಚಿಂತಕಿ, ಲೇಖಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುವುದು ಇವರ ಹವ್ಯಾಸವಾಗಿದೆ.
‘ತಮಿಳ್ ಕಾವ್ಯ ಮೀಮಾಂಸೆ’, ‘ಮಾನುಷಿಯ ಮಾತು’, ‘ಬಹುಮುಖ’, ‘ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ’ ಸಂಶೋಧನೆ (ಮಹಾಪ್ರಬಂಧ), ‘ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ’ (ಸಂಪಾದನೆ), ‘ಆಕಾಶಮಲ್ಲಿಗೆಯ ಘಮ ಎಂಬ’ ಸಣ್ಣಕತೆಯನ್ನು, ‘ರಂಗಶಾಲೆ’ ಎಂಬ ಮಕ್ಕಳ ನಾಟಕವನ್ನು, ‘ಕೆಂಪು ಬಲೂನು ಇತರೆ ಶಿಶುಗೀತೆಗಳು’, ಕರ್ನಾಟಕ ಲೇಖಕಿಯರ ಸಂಘ ಪ್ರಕಟಿಸಿರುವ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಗುಡಿಬಂಡೆ ಪೂರ್ಣಿಮಾ ದತ್ತನಿಧಿ ಬಹುಮಾನ ಕರ್ನಾಟಕ ಲೇಖಕಿಯರ ಸಂಘದಿಂದ ದೊರಕಿದೆ. ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ (2007), ಕರ್ನಾಟಕ ಬಾಲವಿಕಾಸ ಅಕಾಡೆಮಿ ಬಹುಮಾನ (2010), ಬುದ್ದ ಪ್ರಶಸ್ತಿ (2011), ಸಂಕ್ರಮಣ ಕಾವ್ಯ ಬಹುಮಾನ (2007) ರಲ್ಲಿ, ಕಲೇಸಂ ಗುಣಸಾಗರಿ ನಾಗರಾಜು ದತ್ತಿ ಬಹುಮಾನ ರಂಗಶಾಲೆ ಕೃತಿಗೆ (2010) ರಲ್ಲಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು ಲಭಿಸಿದೆ.