ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಆಂದ್ರ ಗಡಿಗೆ ಅಂಟಿಕೊಂಡಿರುವ ಬೆಜ್ಜಿಹಳ್ಳಿ ಎಂಬ ಪುಟ್ಟ ಊರಿನವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಹಳಗನ್ನಡ ಗದ್ಯ ಸಾಹಿತ್ಯದ ಮೇಲೆ ಪಿಎಚ್.ಡಿ. ಮಾಡಿದ್ದಾರೆ. ‘ಆಧುನಿಕ ಪೂರ್ವ ಕನ್ನಡ ಕಥನ ಸಾಹಿತ್ಯದಲ್ಲಿ ಪ್ರಭುತ್ವ ಧರ್ಮ ಪ್ರಭುತ್ವ ಮತ್ತು ಜನತೆ’ ಅವರ ಸಂಶೋಧನಾ ಮಹಾಪ್ರಬಂಧದ ಶೀರ್ಷಿಕೆ. ಇದು ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡು ಜನಮನ್ನಣೆ ಗಳಿಸಿದೆ.
ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿದ ಇವರು ಸಧ್ಯ ಬೆಂಗಳೂರಿನ ಜೆಸ್ವಿಟ್ ಎಜುಕೇಶನ್ ಸೊಸೈಟಿಯ ಭಾಗವಾದ ಲೊಯೋಲ ಪದವಿ ಕಾಲೇಜಿನಲ್ಲಿ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಓದು ಬರವಣಿಗೆ ಅಧ್ಯಾಪನ ಮತ್ತು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾ ನಾಡಿನ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಐದು ಅಲೆಮಾರಿ ಸಮುದಾಯಗಳ ಕುರಿತು ಸಂಶೋಧನೆಯನ್ನು ನಡೆಸಿ ಮಹಾಪ್ರಬಂಧವನ್ನು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಗೆ ಸಲ್ಲಿಸಿದ್ದಾರೆ.