ನಿರ್ದೇಶಕ, ಚಿತ್ರಕತೆಗಾರ, ಸಾಕ್ಷ್ಯಚಿತ್ರ ತಯಾರಕರಾಗಿರುವ ಕೆ.ಎಂ. ಚೈತನ್ಯ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪತ್ರಿಕೋಧ್ಯಮದಲ್ಲಿ ಪದವಿ ಪಡೆದಿದ್ದಾರೆ. ಬಿ.ಬಿ.ಸಿ ವಾಹಿನಿಗಾಗಿ ಕಿರುಚಿತ್ರಗಳನ್ನು, ಸಾಕ್ಷ್ಯಚಿತ್ರಗಳನ್ನು ಮತ್ತು ಕನ್ನಡ-ಈಟಿವಿ ಗಾಗಿ ದೇವನೂರ ಮಹಾದೇವರ ‘ಕುಸುಮಬಾಲೆ’, ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’, ‘ಒಂದಾನೊಂದು ಕಾಲದಲ್ಲಿ’, ‘ಮುಗಿಲು’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಚಿತ್ರಕ್ಕೆ ಗಿರೀಶ ಕಾರ್ನಾಡರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಚೈತನ್ಯ, ಅಗ್ನಿ ಶ್ರೀಧರ್ ಅವರ ಆ ದಿನಗಳು ಕಥೆಯನ್ನು ಆಧರಿಸಿ ಅದೇ ಹೆಸರಿನಲ್ಲಿ ಚಿತ್ರ ನಿರ್ದೇಶಕ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾದರು.
ಇನ್ನು ಚಂದ್ರಶೇಖರ ಕಂಬಾರರ “ಸಾಂಬಶಿವ ಪ್ರಹಸನ” ನಾಟಕ, ಪಿ. ಲಂಕೇಶ್ ಅವರ “ಸಂಕ್ರಾಂತಿ” ಸೇರಿದಂತೆ ಹಲವು ಪ್ರಸಿದ್ಧ ಲೇಖಕರ ನಾಟಕಗಳನ್ನು ರಂಗಭೂಮಿಗೆ ಅಳವಡಿಸಿದ್ದಾರೆ.
ಇವರಿಗೆ ಭಾರತೀಯ ಸಿನಿಮಾಟೋಗ್ರಾಫರ್ಸ್ ಅಸೋಸಿಯೇಷನ್, ಚೆನ್ನೈ ಫಿಲ್ಮ್ ಫ್ಯಾನ್ಸ್ ಅಸೋಸಿಯೇಷನ್ ಮತ್ತು ರಾಘವೇಂದ್ರ ಚಿತ್ರವಾಣಿಯಿಂದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗಳು ಲಭಿಸಿವೆ.