ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ. ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ ಅವರದು.
ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಜನಪದ, ಕಥೆ, ವಿಚಾರ, ವಿಮರ್ಶೆ, ಸೃಜನ, ಅನುವಾದ ಮುಂತಾದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ‘ರಮಾಬಾಯಿ’ ಕಾದಂಬರಿ ನಾಟಕವಾಗಿ ಜನಪ್ರಿಯವಾಗಿದೆ. ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ