ಭಾರತೀಯ ಚಲನಚಿತ್ರ ಪ್ರವರ್ತಕರಲ್ಲಿ ಒಬ್ಬರಾಗಿರುವ ಗಿರೀಶ್ ಕಾಸರವಳ್ಳಿ ತಮ್ಮ ಕೃತಿಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಚಿನ್ನದ ಪದಕ ವಿಜೇತರಾಗಿರುವ ಅವರು ತಮ್ಮ ಡಿಪ್ಲೊಮಾವನ್ನು ಪೂರೈಸಲು ಮಾಡಿದ ಚಲನಚಿತ್ರ ‘ಅವಶೇಶ್’ ಅತ್ಯುತ್ತಮ ವಿದ್ಯಾರ್ಥಿ ಚಲನಚಿತ್ರ ಮತ್ತು ಆ ವರ್ಷದ ಅತ್ಯುತ್ತಮ ಕಿರು ಕಾಲ್ಪನಿಕ ಚಲನಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ.
ಕರ್ನಾಟಕದ ಮಲೆನಾಡಿನವರಾದ ಗಿರೀಶ ಕಾಸರವಳ್ಳಿ ಕಳೆದ ಅರ್ಧ ಶತಮಾನದ ಚಿತ್ರಯಾನದಲ್ಲಿ 15 ಕಥಾಚಿತ್ರಗಳನ್ನಲ್ಲದೇ ಕೆಲವು ಸಾಕ್ಷ್ಯ ಚಿತ್ರಗಳನ್ನೂ, 2 ಟೆಲಿಫಿಲ್ಸ್‌ಗಳನ್ನೂ, ‘ಗೃಹಭಂಗ’ ಟಿವಿ ಧಾರಾವಾಹಿಯನ್ನೂ ನಿರ್ದೇಶಿಸಿದ್ದಾರೆ. ಈ ಚಿತ್ರಗಳು ಜನ ಮೆಚ್ಚಿಗೆಯನ್ನು ಪಡೆದಿವೆಯಲ್ಲದೇ ಅನೇಕ ಪ್ರಶಸ್ತಿಗಳಿಗೂ ಭಾಜನವಾಗಿವೆ. ಅವರ ಚಿತ್ರಗಳು 27 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ, 25 ರಾಷ್ಟ್ರ ಪ್ರಶಸ್ತಿಗಳನ್ನೂ 46 ರಾಜ್ಯ ಪ್ರಶಸ್ತಿಗಳನ್ನೂ ಪಡೆದಿವೆ. ಅವುಗಳಲ್ಲಿ ಅವರು ವೈಯಕ್ತಿಕವಾಗಿ ಪಡೆದ ರಾಷ್ಟ್ರಪತಿಗಳ ಪದಕ (15 ಬಾರಿ), ರಾಜ್ಯಪ್ರಶಸ್ತಿ (13 ಬಾರಿ) ಗಳೂ ಸೇರಿವೆ. ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿಯನ್ನು ನಾಲ್ಕು ಬಾರಿ ಪಡೆದ ನಾಲ್ವರು ಭಾರತೀಯ ನಿರ್ದೇಶಕರಲ್ಲಿ ಕಾಸರವಳ್ಳಿಯವರೂ ಒಬ್ಬರು. ಇವಲ್ಲದೆ ಇವರ ಚಿತ್ರಗಳು ಫಿಲ್ಮ ಫೇರ್ ಪ್ರಶಸ್ತಿ, ಇಂಡಿಯನ್ ಎಕ್ಸ್‌ಪ್ರೆಸ್ ಪ್ರಶಸ್ತಿ, ವಿ. ಶಾಂತಾರಾಂ ಪ್ರಶಸ್ತಿ, ಲಂಡನ್ನಿನ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ, ಇತ್ಯಾದಿಯಾಗಿ 23 ಪ್ರಶಸ್ತಿಗಳನ್ನೂ ಪಡೆದಿವೆ. 36ಕ್ಕಿಂತ ಹೆಚ್ಚು ದೇಶಗಳ ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳು ಪ್ರದರ್ಶನ ಕಂಡಿವೆ. ಅವರ ಚಿತ್ರಗಳನ್ನು ಕುರಿತಂತೆ ಇಂಗ್ಲೀಷಿನಲ್ಲಿ 11 ಪುಸ್ತಕಗಳು, ಕನ್ನಡದಲ್ಲಿ 4 ಪುಸ್ತಕಗಳು ಪ್ರಕಟವಾಗಿವೆ.
ಮೂರು ಜನರು ಅವರ ಮೇಲೆ ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದು ಪಿ.ಹೆಚ್.ಡಿ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಸ್ತರದಲ್ಲಿ 9 ಪುಸ್ತಕಗಳಲ್ಲಿ ಅವರ ಸಿನಿಮಾಗಳ ಬಗ್ಗೆ ಪ್ರಬಂಧಗಳು ದೊರಕುತ್ತವೆ. ಅವರಿಗೆ 2 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್, ನಾಲ್ಕು ಸಂಸ್ಥೆಗಳು ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಿವೆ. ಇವೆಲ್ಲವಕ್ಕೂ ಕಿರೀಟ ಪ್ರಾಯವಾಗಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮ ಚಿತ್ರಗಳ ಸಂಕಥನ ‘ಬಿಂಬ ಬಿಂಬನ’ ಕೃತಿಯನ್ನು ಗೋಪಾಲಕೃಷ್ಣ ಪೈ ಅವರೊಂದಿಗೆ ರಚಿಸಿದ್ದಾರೆ.