ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಅವರು ಕನ್ನಡ ಪತ್ರಿಕೋದ್ಯಮದ ಪ್ರಮುಖರಲ್ಲಿ ಒಬ್ಬರು. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್ ಲೈನ್ ಮೂರು ಮಾಧ್ಯಮಗಳಲ್ಲಿ ಅನುಭವ ಹೊಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಮೊದಲ ರ್ಯಾಂಕ್ ನೊಂದಿಗೆ ಪದವಿ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಪ್ರಜಾವಾಣಿಯ ವರದಿಗಾರರಾಗಿ, ಈ-ಟಿವಿ ಚಾನಲ್ ನ ಹಿರಿಯ ಸಂಪಾದಕರಾಗಿ, ಸಮಯ ಚಾನಲ್ ಹಾಗೂ ಅವಧಿಯ ಪ್ರಧಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
‘ಸೋನೆಮಳೆಯ ಸಂಜೆ’, ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನಗಳು, ‘ನನ್ನೊಳಗಿನ ಹಾಡು ಕ್ಯೂಬಾ’ (ಪ್ರವಾಸ ಕಥನ), ‘ಕಾಫಿ ಕಪ್ಪಿನೊಳಗೆ ಕೊಲಂಬಸ್'(ವಿಚಾರ ಕಥನ) ಇವರ ಪ್ರಮುಖ ಕೃತಿಗಳು.
ಸಾಹಿತ್ಯ, ನಾಟಕ, ಮಾಧ್ಯಮ ಅಕಾಡೆಮಿ, ಕರ್ನಾಟಕ ರಾಜ್ಯ ಅಭಿವೃದ್ಧಿ ಪತ್ರಿಕೋದ್ಯಮ ಪುರಸ್ಕಾರ, ಪು.ತಿ.ನ ಹಾಗೂ ಸಂದೇಶ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು ಇವರಿಗೆ ಲಭಿಸಿವೆ.