ದಯಾನಂದ
ಕನ್ನಡದ ಬಹುಮುಖ್ಯ ಲೇಖಕರಲ್ಲಿ ಒಬ್ಬರಾಗಿರುವ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿರುವ ಅವರು ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವ ಪಡೆದಿದ್ದು, ಸದ್ಯ ಬೆಂಗಳೂರಿನ ಸಂವಾದ ಸಂಸ್ಥೆಯಲ್ಲಿ ಮಾಧ್ಯಮ ಅಧ್ಯಾಪಕರಾಗಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನ ಪಡೆದು 2005ರಲ್ಲಿ ಪ್ರಕಟಗೊಂಡ ನಾಟಕ ‘ಬಾಳಪೂರ್ಣ’. ಛಂದ ಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ‘ಬುದ್ಧನ ಕಿವಿ’ ಇವರ ಎರಡನೇ ಕಥಾ ಸಂಕಲನ.
ಇವರ ಕತೆಗಳಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ, ಸಂಕ್ರಮಣ ಕಥಾ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ, ಸಮಾಜಮುಖಿ ಕಥಾ ಪುರಸ್ಕಾರ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿದೆ.