ಲೇಖಕ, ಪ್ರಖ್ಯಾತ ಅನುವಾದಕರಾಗಿರುವ ಚಂದ್ರಕಾಂತ ಪೋಕಳೆ ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರು. ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿರುವ ಅವರು ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಿಚಯಿಸುತ್ತಿದ್ದಾರೆ. ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ.
ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು, ಇನ್ನೂರಕ್ಕೂ ಹೆಚ್ಚು ಕಥೆಗಳನ್ನು, 50 ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ‘ಮಾನು’, ‘ಶ್ವಪಥ’, ‘ಉಚಲ್ಯಾ’, ‘ಒಂದೊಂದೇ ಎಲೆಯುದುರಿದಾಗ’, ‘ಕುಣಿಯೆಘುಮಾ’, ‘ಪಾಣಿಪತ’ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯ ಮತ್ತು ಅನುವಾದ ಕ್ಷೇತ್ರದ ಸಾಧನೆಗಾಗಿ 2001ರಲ್ಲಿ ವರದರಾಜ ಆದ್ಯಪ್ರಶಸ್ತಿ, 2002 ರಲ್ಲಿ ಸಂಗಾತಿ ಅಕಾಡಮಿ ಪ್ರಶಸ್ತಿ, 2002 ಮತ್ತು 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2004 ರಲ್ಲಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ, 2008ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.