ಅಕ್ಕಿನೇನಿ ಕುಟುಂಬ ರಾವ್
ತೆಲುಗು ಸಾಹಿತ್ಯದ ಕಾದಂಬರಿ ಪ್ರಕಾರ ಮತ್ತು ತೆಲುಗು ಸಿನೆಮಾ ಪ್ರಪಂಚ, ಎರಡರಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿರುವ ಅಪರೂಪದ ಹಿರಿಯ ಪ್ರತಿಭೆ ಅಕ್ಕಿನೇನಿ ಕುಟುಂಬ ರಾವ್. ತೆಲುಗಿನ ಪರ್ಯಾಯ ಸಿನಿಮಾ ಲೋಕ ಮತ್ತು ಡಾಕ್ಯುಮೆಂಟರಿ ಸಿನಿಮಾ ವಲಯದಲ್ಲಿ ಅತ್ಯಂತ ಚಿರಪರಿಚಿತ ಹೆಸರು ಇವರದ್ದು. ಸಿನಿಮಾ ಕ್ಷೇತ್ರದಷ್ಟೇ ಗಂಭೀರವಾಗಿ ಕಾದಂಬರಿ ಕ್ಷೇತ್ರದಲ್ಲೂ ಸಾಹಿತ್ಯ ಕೃಷಿ ಮಾಡಿದ ಇವರ 10 ಕೃತಿಗಳು ಪ್ರಕಟವಾಗಿವೆ. ಆ ಪೈಕಿ ಮೂರು ಅರೆ- ಆತ್ಮಕಥೆಗಳ ರೂಪದಲ್ಲಿವೆ. ಇವರ ಎರಡು ಕಾದಂಬರಿಗಳು ಇಂಗ್ಲಿಷ್ ಭಾಷೆಗೆ ಬಾಷಾಂತರಗೊಂಡು ಪ್ರಕಟವಾಗಿವೆ. ’ಪಟ್ಟಣಂಲೋ ಬದುಕುಂಡಾಮನಿ’ ಇವರ ಇತ್ತೀಚಿನ ಪ್ರಮುಖ ಕಾದಂಬರಿ. ಸಿನಿಮಾ ಲೋಕದಲ್ಲಿ ಇವರು ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು, ಎರಡು ನಂದಿ ಪ್ರಶಸ್ತಿಗಳು, ಒಂದು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಕೃತಿಯೊಂದು ತೆಲುಗು ವಿಶ್ವವಿದ್ಯಾಲಯದಿಂದ ’ಶ್ರೇಷ್ಠ ಕಾದಂಬರಿ’ ಪ್ರಶಸ್ತಿಯನ್ನು ಪಡೆದಿದೆ.