ಕನ್ನಡ ಸಿನಿಮಾ ನಿರ್ದೇಶಕ, ಚಿತ್ರಕತೆಗಾರ ಅಭಯ ಸಿಂಹ ಮೂಲತಃ ಮಂಗಳೂರಿನವರು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದ ಅವರು ಕನ್ನಡ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿದ್ದಾರೆ. ನಂತರ ‘ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಿಂದ ಚಲನಚಿತ್ರ ನಿರ್ದೇಶನದಲ್ಲಿ ಪರಿಣತಿ ಪಡೆದಿದ್ದು, 2007 ರಲ್ಲಿ ಬೆಂಗಳೂರಿನಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ಚಿತ್ರ ‘ಗುಬ್ಬಚ್ಚಿಗಳು’ 2008ರ ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ಎರಡನೇ ಚಿತ್ರ ‘ಶಿಕಾರಿ’ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಮೂರನೇ ಚಿತ್ರ ನಟ ಗಣೇಶ್ ಅಭಿನಯದ ‘ಸಕ್ಕರೆ’. ಆನಂತರ ‘ಪದ್ದಾಯಿ’ ಎಂಬ ತುಳು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.