ಜಯಂತ ಕಾಯ್ಕಿಣಿ
ಕವಿ-ಕತೆಗಾರ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ಮುಂಬೈನ ಫಾರ್ಮಾ ಕಂಪೆನಿಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಜಯಂತ ಅವರು ನಂತರ ’ಭಾವನಾ’ ಪತ್ರಿಕೆಯ ಸಂಪಾದಕರಾಗಿದ್ದರು. ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕಾರ್ಯ ನಿರ್ವಹಿಸಿದ ಅನುಭವ ಇರುವ ಅವರು ಮನಮುಟ್ಟುವ ಗೀತೆಗಳನ್ನು ರಚಿಸಿದ್ದಾರೆ. ಅವು ಕನ್ನಡದ ಸಿನಿಮಾಗಳಲ್ಲಿ ಸೂಪರ್ ಹಿಟ್ ಆಗಿವೆ. ನಾಟಕಗಳನ್ನು ಅನುವಾದಿಸಿರುವ ಅವರು ಅಂಕಣಕಾರರೂ ಹೌದು. ’ತೆರೆದಷ್ಟೇ ಬಾಗಿಲು’, ’ದಗಡೂ ಪರಬನ ಅಶ್ವಮೇಧ’, ಅಮೃತಬಳ್ಳಿ ಕಷಾಯ’, ’ತೂಫಾನ್ ಮೇಲ್’ ಕಥಾ ಸಂಕಲನಗಳು. ’ರಂಗದಿಂದೊಂದಷ್ಟು ದೂರ’, ’ಕೋಟಿತೀರ್ಥ’, ’ಶ್ರಾವಣ ಮಧ್ಯಾಹ್ನ’, ’ನೀಲಿ ಮಳೆ’ ಕವನ ಸಂಕಲನಗಳು. ಅವರ ಅನುವಾದಿತ ಸಣ್ಣಕತೆಗಳ ’ನೋ ಪ್ರೆಸೆಂಟ್ ಪ್ಲೀಸ್’ ಸಂಕಲನಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ’ಡಿಎಸ್ಸಿ ಸಾಹಿತ್ಯ ಪ್ರಶಸ್ತಿ’ ಸಂದಿದೆ. ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ ಕುಸುಮಾಗ್ರಜ, ಪ್ರಶಸ್ತಿ, ರಾಷ್ಟ್ರೀಯ ಕಥಾ ಪ್ರಶಸ್ತಿಗಳೂ ಸಂದಿವೆ.