ಎರಡೂವರೆ ಸಾವಿರ ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ದಕ್ಷಿಣ ಭಾರತದ ಭಾಷೆಗಳ (ತಮಿಳು, ಕನ್ನಡ, ಮಲಯಾಳಂ, ತೆಲುಗು) ನಡುವಿನ ಪರಸ್ಪರ ಸಂಬಂಧವು ಐತಿಹಾಸಿಕ ಮಹತ್ವದ್ದಾಗಿದೆ. ಈ ಸಂಬಂಧವನ್ನು ಸಂಭ್ರಮಿಸಲಿಕ್ಕಾಗಿ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಆಯೋಜಿಸಲಾಗಿದೆ.
ಭಾರತದಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಆ ಪೈಕಿ ದಕ್ಷಿಣ ಭಾರತದ ಸಾಹಿತ್ಯವು ’ಸಿಲಪ್ಪದಿಗಾರಂ’, ’ಆದಿಪುರಾಣ’, ’ರಾಮಚರಿತಂ’, ’ಆಂಧ್ರ ಮಹಾಭಾರತಂ’ ’ತಿರುನಿಝಲ್ಮಲಾ’ ಕಾವ್ಯಗಳ ಮೂಲಕ ಶ್ರೀಮಂತ ಪರಂಪರೆಗೆ ನಾಂದಿ ಹಾಡಿತು. ಹಾಗೆಯೇ ಹಲವಾರು ಆಧುನಿಕ ಕೃತಿಗಳು ಕೂಡ ಆಯಾ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿವೆ. ೫೮ ಜನ ಜ್ಞಾನಪೀಠ ಪುರಸ್ಕೃತರ ಪೈಕಿ ಈ ಪ್ರದೇಶದ ೧೯ ಜನ ಕವಿ-ಲೇಖಕರಿದ್ದಾರೆ. ದಕ್ಷಿಣ ಭಾರತದ ಸಾಹಿತ್ಯಾಸಕ್ತರು ಮತ್ತು ಲೇಖಕರು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ನಡೆಯಲಿದೆ. ಇದರಲ್ಲಿ ಪ್ರಕಾಶಕರು, ಓದುಗರು, ಲೇಖಕರು ಮತ್ತು ಪುಸ್ತಕ ಮಾರಾಟಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
ಹಂಪನಾ ನಾಗರಾಜಯ್ಯ ಅವರು ಗ್ರಂಥ ಸಂಪಾದಕ, ವಾಗ್ಮಿ, ವಿದ್ವಾಂಸ ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. ‘ಹಂಪನಾ’ ಅವರ ಕಾವ್ಯನಾಮ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗೌರವ ಕಾರ್ಯದರ್ಶಿಯಾಗಿ, ಜೈನ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದ್ರಾವಿಡ ಭಾಷಾ ವಿಜ್ಞಾನ, ಭಾರತದ ಭಾಷಾ ಸಮಸ್ಯೆ, ಪಂಪಭಾರತ ಸಂಗ್ರಹ, ಭರತೇಶ ವೈಭವ, ಧನ್ಯಕುಮಾರ ಚರಿತ್ರೆ, ನೇಮಿನಾಥ ಪುರಾಣ, ಶಾಂತಿ ಪುರಾಣ, ಸವ್ಯಸಾಚಿ ಪಂಪ, ಜಾನಪದ-ಕರ್ನಾಟಕದ ಜಾತ್ರೆಗಳು ಅವರ ಪ್ರಮುಖ ಕೃತಿಗಳು. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ತಮ್ಮಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ, ಆಚಾರ್ಯ ಸುಮತಿ ಸಾಗರ ಶ್ರುತ ಸಂವರ್ಧನ ಪುರಸ್ಕಾರ ಗಳು ಸಂದಿವೆ.
ವಿಮರ್ಶಕ, ಲೇಖಕ ಮಲ್ಲೇಪುರಂ ಜಿ. ವೆಂಕಟೇಶ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸಂವಿತ್ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಡೀನ್ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಶಂಬಾ ಅಧ್ಯಯನ, ಸಂಸ್ಕೃತಿ ಮತ್ತು ಶಂಬಾ, ಸಾಹಿತ್ಯ ಮತ್ತು ಪುರಾಣ, ಪ್ರವಾಸ ಸಾಹಿತ್ಯ - ಒಂದು ಅಧ್ಯಯನ, ಡಾ. ಶಂಬಾ ಜೋಶಿಯವರ ಸಮಗ್ರ ಸಂಪುಟಗಳು ಸೇರಿದಂತೆ 80ಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನ ಪ್ರಕಟಿಸಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಆಜೀವ ಸದಸ್ಯ ಪುರಸ್ಕಾರ, ವಿದ್ವಾನ್ ಎನ್.ರಂಗನಾಥಶರ್ಮಾ ಸಂಸ್ಕೃತಿ ಪುರಸ್ಕಾರವು ಲಭಿಸಿದೆ.
ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು.ಸಾಹಿತ್ಯದ ಅತಿ ಸಂಕೀರ್ಣ ಸಂಗತಿಗಳನ್ನು, ಒಣ ವಿಚಾರವೆನ್ನಿಸದೆ ಅತಿ ಸ್ವಾರಸ್ಯಕರವಾಗಿ ಹಾಗೂ ಸರಳ ರೀತಿಯಲ್ಲಿ ವಿಶ್ಲೇಷಿಸಿ, ಅದು ಎಲ್ಲ ವರ್ಗದ ಓದುಗರನ್ನೂ ತಲುಪುವಂತೆ ನಿರೂಪಿಸುವುದರಲ್ಲಿ ನಿಸ್ಸಿಮರು.‘ಆಧುನಿಕ ಕಾವ್ಯದ ಹಿನ್ನೆಲೆಯಲ್ಲಿ ಕೆ.ಎಸ್.ನ. ಕಾವ್ಯ-ಒಂದು ಅಧ್ಯಯನ’ ಎಂಬ ಪ್ರೌಢಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಮೊದಲ ವಿಮರ್ಶಾ ಲೇಖನಗಳ ಸಂಕಲನ ‘ಅನುಸಂಧಾನ’ ಇದೊಂದು ಗಮನಾರ್ಹ ಕೃತಿಯಾಗಿದ್ದು ಇವರನ್ನೂ ವಿಮರ್ಶಕರ ಸಾಲಿಗೆ ಸೇರಿಸಿದ ಕೃತಿಯಾಗಿದೆ.ನಂತರದ ದಿನಗಗಲ್ಲಿ ಪ್ರಕಟವಾದ ವಿಮರ್ಶಾ ಕೃತಿಗಳೆಂದರೆ ನವ್ಯತೆ, ಸಾಹಿತ್ಯ ಸಂಸ್ಕೃತಿ, ಇಹರ ಪರಿಮಳದ ಹಾದಿ ಮತ್ತು ಪ್ರಬಂಧ ಸಂಕಲನ ‘ಅಂತರಂಗದ ಮೃದಂಗ’. 'ಕನ್ನಡ ವಿಮರ್ಶಾ ವಿವೇಕ', 'ನೆಲದನಿ' ಇವರಿಗೆ ಅರ್ಪಿಸಿದ ಗೌರವ ಗ್ರಂಥಗಳು. ವಿ. ಎಂ. ಇನಾಂದಾರ್ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸ. ಸ. ಮಾಳವಾಡ ಪುರಸ್ಕಾರ, ವಿಶ್ವಮಾನವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೋರಖನಾಥ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾಗಿದ್ದಾರೆ.
ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ಆಶಾದೇವಿ ಅವರು ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ತ್ರೀಮತವನುತ್ತರಿಸಲಾಗದೆ?, ನಡುವೆ ಸುಳಿವಾತ್ಮ, ಹುದುಗಲಾರದ ದುಃಖ ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂ.ಕೆ.ಇಂದಿರಾ ಪ್ರಶಸ್ತಿ, ಇನ್ಫೋಸಿಸ್ ಪ್ರಶಸ್ತಿ, ಜಿಎಸ್ಎಸ್ ಪ್ರಶಸ್ತಿ, ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿಗಳು ಲಭಿಸಿವೆ.
ಡಾ. ವಸುಂಧರಾ ಭೂಪತಿಯವರು ವೈದ್ಯೆ ಹಾಗೂ ಲೇಖಕಿ. ವಿಜ್ಞಾನ, ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಅವರ ಮುಖ್ಯ ಸಾಹಿತ್ಯ ವಸ್ತುಗಳು. ಆಕಾಶವಾಣಿಯಲ್ಲಿ ಆರೋಗ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚಿನ ಫೋನ್-ಇನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆರೋಗ್ಯ ಸಂಗಾತಿ, ಮನೆಯಂಗಳದಲ್ಲಿ ಔಷಧಿವನ, ಹೂವು ಮತ್ತು ಆರೋಗ್ಯ, ಏಡ್ಸ್! ಪ್ರಳಯ ಎದುರಿಸಲು ಸಿದ್ಧರಾಗಿ, ಆಹಾರ ಮತ್ತು ಆರೋಗ್ಯ, ಜೀವಸೆಲೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ವಸುಂಧರಾ ಭೂಪತಿ ಅವರಿಗೆ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಲೇಖಕಿ ಪುರಸ್ಕಾರ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಸಂದಿವೆ.
ಓ.ಎಲ್.ನಾಗಭೂಷಣ ಸ್ವಾಮಿ ವಿಮರ್ಶಕ ಓ.ಎಲ್ ನಾಗಭೂಷಣ ಸ್ವಾಮಿ ಅವರು ಕನ್ನಡದ ಪ್ರತಿಷ್ಠಿತ ಲೇಖಕರಲ್ಲೊಬ್ಬರು. ನನ್ನ ಹಿಮಾಲಯ, ನಮ್ಮ ಕನ್ನಡ ಕಾವ್ಯ, ಏಕಾಂತ ಲೋಕಾಂತ, ಮತ್ತೆ ತೆರೆದ ಬಾಗಿಲು ಕೃತಿಗಳು ಸೇರಿದಂತೆ ಅಕ್ಕ ತಂಗಿಯರು, ಕನ್ನಡಕ್ಕೆ ಬಂದ ಕವಿತೆ, ಯುದ್ಧ ಮತ್ತು ಶಾಂತಿ ಅನುವಾದ ಕೃತಿಗಳು ಪ್ರಕಟವಾಗಿವೆ. ಅನೇಕ ಕನ್ನಡ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸಿದ್ದು, ಅವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಜಿ.ಎಸ್.ಎಸ್ ಪ್ರಶಸ್ತಿ ಸಂದಿವೆ.
ಡಾ. ರಾಜೇಂದ್ರ ಚೆನ್ನಿ ವಿಮರ್ಶಕ, ಹಿರಿಯ ಲೇಖಕ ರಾಜೇಂದ್ರ ಚೆನ್ನಿ ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ದೇಶೀವಾದ, ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ, ಸಾಹಿತ್ಯ ವಿಮರ್ಶೆ, ಮಾಸ್ತಿ ಕತೆಗಳು: ಒಂದು ಅಧ್ಯಯನ, ಕರುಳ ಬಳ್ಳಿಯ ಸೊಲ್ಲು, ನಡುಹಗಲಿನಲ್ಲಿ ಕಂದೀಲುಗಳು ಪ್ರಕಟಿತ ಕೃತಿಗಳು. ದೊಡ್ಡ ಮರ, ಮಳೆಯಲ್ಲಿ ಬಂದಾತ ಕಥಾಸಂಕಲನಗಳು. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಜಿ.ಎಸ್.ಎಸ್. ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ತಮಿಳು ಲೇಖಕ ಪಾವಣ್ಣನ್ ಅವರು ಕಾದಂಬರಿ, ಸಾಹಿತ್ಯ ವಿಮರ್ಶೆ ಮತ್ತು ಮಕ್ಕಳ ಸಾಹಿತ್ಯ, ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹ. ದಲಿತ ಸಾಹಿತ್ಯವನ್ನು ಕನ್ನಡದಿಂದ ತಮಿಳಿಗೆ ಭಾಷಾಂತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ವಾಜಲ್ಕೈ ಒರು ವಿಸರನೈ, ಸಿತಾರಲ್ಗಲ್ ಮತ್ತು ಪೈಮರಕಪ್ಪಲ್ ಕಾದಂಬರಿಗಳಾದರೆ, ಕುಝಂತೈಯೈ ಪಿನ್ ಥೋಡರುಮ್ ಕಾಲಂ ಮಕ್ಕಳ ಸಾಹಿತ್ಯವನ್ನು ಪ್ರಕಟಿಸಿದ್ದಾರೆ. ಅವರಿಗೆ ಇಲಕಿಯ ಸಿಂಥನೈ ಪ್ರಶಸ್ತಿ, ಚೆನ್ನೈ ಲಿಟರೇಚರ್ ಫೆಸ್ಟಿವಲ್ ಅತ್ಯುತ್ತಮ ಬರಹಗಾರ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೆನಡಿಯನ್ ಲಿಟರರಿ ಗಾರ್ಡನ್ನಿಂದ ಇಯಲ್ ವಿರುಧು ಪ್ರಶಸ್ತಿಗಳು ಸಂದಿವೆ.
ಪಿ.ಶೇಷಾದ್ರಿ ಕನ್ನಡ ಚಲನಚಿತ್ರಗಳ ಪ್ರಮುಖ ನಿರ್ದೇಶಕರು. ಸತತ ಏಳು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ. ಇವರ ಮೊದಲ ಕಾದಂಬರಿ ಆಧಾರಿತ ಸಿನಿಮಾ ಮುನ್ನುಡಿ. ನಂತರದಲ್ಲಿ ಅತಿಥಿ, ಬೇರು, ತುತ್ತೂರಿ, ವಿಮುಕ್ತಿ, ವಿದಾಯ, ಬೇಟಿ, ಮೂಕಜ್ಜಿಯ ಕನಸುಗಳು, ಭಾರತ್ ಸ್ಟೋರ್ಸ್, ಬೆಟ್ಟದ ಜೀವ ಸಿನಿಮಾಗಳು ತೆರೆಕಂಡಿವೆ. ಅವರ ಇಂಚರ, ಕಾಮನಬಿಲ್ಲು, ಮಾಯಮೃಗ, ಕಣ್ಣಾಮುಚ್ಚಾಲೆ, ಉಯ್ಯಾಲೆ, ಸುಪ್ರಭಾತ ಟಿವಿ ಧಾರವಾಹಿಗಳಾಗಿ ಮೂಡಿಬಂದಿದೆ.
ಅನುವಾದಕ, ಲೇಖಕ, ವಾಗ್ಮಿ, ಸಂಘಟಕ ಸುಧಾಕರನ್ ರಾಮಂತಲಿ ಕನ್ನಡದಿಂದ ಮಲಯಾಳಂ ಭಾಷೆಗೆ 27 ಕೃತಿಗಳನ್ನು ಅನುವಾದಿಸಿದ್ದಾರೆ. ಬೆಂಗಳೂರಿನ ಕನಕದಾಸ ಅಧ್ಯಯನ ಸಂಶೋಧನಾ ಕೇಂದ್ರದಲ್ಲಿ ಸಂಯೋಜಕರಾಗಿ ಮತ್ತು ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಿಂಗಾಮಿ, ಆರಂಗೋಳಿಯುನ್ನ ಅಚ್ಯುತನ್ ಕೃತಿಗಳನ್ನು ಪ್ರಕಟಿಸಿದ್ದಾರೆ. ಕರಿಮಯಿ, ಜೋಕುಮಾರಸ್ವಾಮಿ, ಅತಿಕ್ರಮಣಂ, ಶಿಖರ ಸೂರ್ಯನ್ ಇವರ ಪ್ರಮುಖ ಅನುವಾದಿತ ಕೃತಿಗಳು. ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪೂರ್ಣ ಉರೂಬ್ ಪ್ರಶಸ್ತಿಗಳು ಲಭಿಸಿವೆ.
ತೆಲುಗು ಮಾತೃಭಾಷೆಯವರಾದ ಅಜಯ್ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಾರೆ. ‘ಗಗನಸಿಂಧು’, ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’, ‘ನಾಲ್ಕನೇ ಎಕರೆ’, ‘ನಳನ ದಮಯಂತಿ’, ‘ಆರ್.ಎಸ್.ಎಸ್. ಲೋತುಪಾತುಲು’, ‘ದಮಯಂತಿಯ ಮಗಳು’ ಇವರ ಇದುವರೆಗಿನ ಪ್ರಕಟಿತ ಕೃತಿಗಳು. ಇವರ ಕವಿತೆಗಳು ಅಸ್ಸಾಮಿ, ಬೆಂಗಾಲಿ, ತೆಲುಗು, ಹಿಂದಿ, ಇಂಗ್ಲಿಷ್, ಸ್ಪಾನಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ತಮ್ಮ ಕೃತಿಗಳಿಗಾಗಿ ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳನ್ನು ಪಡೆದುಕೊಂಡ ಅಜಯ್ ಸದ್ಯ ಹೈದರಾಬಾದಿನ ಆಂಗ್ಲ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನದಲ್ಲಿ ಸಂಶೋಧನಾರ್ಥಿ ಆಗಿದ್ದಾರೆ.